ಜನಪದ ನಂಬಿಕೆಗಳು
ಜನಪದ ನಂಬಿಕೆಗಳು ಜಾನಪದದ ಒಂದು ಪ್ರಕಾರ, ಅಧ್ಯಯನ ದೃಷ್ಟಿಯಿಂದ ಜಾನಪದವನ್ನು ಸಾಹಿತ್ಯಿಕ, ಭಾಷಿಕ, ಕ್ರಿಯಾತ್ಮಕ ಮತ್ತು ವೈಜ್ಞಾನಿಕ ಎಂದು ವಿಭಾಗಿಸಿದಲ್ಲಿ, ಜನಪದ ನಂಬಿಕೆಗಳನ್ನು ವೈಜ್ಞಾನಿಕ ಬಗೆಯಲ್ಲಿ ಸೇರಿಸಲಾಗುತ್ತದೆ. ನಂಬಿಕೆ ಎಂದರೆ ಒಂದು ಹೇಳಿಕೆ ಅಥವಾ ವಸ್ತು ಸ್ಥಿತಿಯ ಬಗ್ಗೆ ಮಾನಸಿಕ ಒಪ್ಪಿಗೆಯನ್ನು ತೋರುವ ಪ್ರವೃತ್ತಿ. ಇಂಥ ನಂಬಿಕೆಗಳು ಆದಿವಾಸಿಗಳಲ್ಲಿ ಮಾತ್ರವಲ್ಲ, ನಾಗರಿಕತೆಯ ಆವರಣದಲ್ಲಿ ವಾಸಿಸುವರಲ್ಲೂ ಬಹಳವಾಗಿ ಕಂಡುಬರುತ್ತವೆ.

ನಂಬಿಕೆಗಳಿಗೂ ಸಂಪ್ರದಾಯಗಳಿಗೂ ನಿಕಟ ಸಂಬಂಧವಿದೆ. ಒಂದು ಮತ್ತೊಂದರ ಪೂರಕ. ಅವುಗಳ ಬೇರು ಜನಾಂಗದ ಸಂಸ್ಕøತಿಯಲ್ಲಿ ಆಳವಾಗಿದ್ದು ಜನಜೀವನವನ್ನು ನಿರ್ದೇಶಿಸುವ ಪ್ರಮುಖ ಶಕ್ತಿಗಳಾಗಿ ಬೆಳೆದಿದೆ. ಜನರ ಬದುಕು ಮತ್ತು ನಂಬಿಕೆಗಳಿಗೆ ಇರುವ ಸಂಬಂಧ ತೀರ ಹತ್ತಿರವಾದದ್ದು. ಈ ದೃಷ್ಟಿಯಿಂದ ಜನಪದ ನಂಬಿಕೆಗಳು ಜನತೆಯ ಆಂತರಿಕ ಮನೋಭಾವ ಹಾಗೂ ಮೂಲ ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಪರಿಚಯಿಸುವ ಪ್ರಮುಖ ಸಾಧನಗಳಾಗುತ್ತವೆ. ಇವುಗಳ ಅಧ್ಯಯನ ಅರ್ಥಪೂರ್ಣವಾಗಲು ಮನಶ್ಯಾಸ್ತ್ರ. ತತ್ತ್ವಶಾಸ್ತ್ರ ಹಾಗೂ ಮಾನವಶಾಸ್ತ್ರಗಳ ನೆರವು ಅತ್ಯಗತ್ಯ. 

ಪರಂಪರಾನುಗತವಾದ ಹಾಗೂ ಎಲ್ಲ ಕಾಲಗಳಲ್ಲೂ ಪುನರಾವರ್ತಿತವಾದ, ಸಾಮೂಹಿಕ ಮನ್ನಣೆಯನ್ನು ದೊರಕಿಸಿಕೊಂಡ ಕಾರ್ಯಕಾರಣ ಹಾಗೂ ಭಾವ ಪ್ರಧಾನವಾದ ಜೀವಂತ ಪಳೆಯುಳಿಕೆಗಳೇ ಜನಪದ ನಂಬಿಕೆಗಳು. ಇವು ಒಂದಾನೊಂದು ಕಾಲದಲ್ಲಿ ಹೆಚ್ಚು ಪ್ರಭುತ್ವದಲ್ಲಿದ್ದ ಸಾಮುದಾಯಕ ಅಭಿಪ್ರಾಯೋಕ್ತಿಗಳು ; ತಲತಲಾಂತರದಿಂದ ಮಾನಸಿಕ ಒಪ್ಪಂದದ ಮುದ್ರೆ ಧರಿಸಿ ಸಮಾಜದಲ್ಲಿ ಪುನರಾವರ್ತಿತವಾಗುತ್ತವೆ; ಕ್ರಮೇಣ ಸಂಸ್ಕøತಿಯಲ್ಲಿ ಮಿಲನಹೊಂದಿ ಸಂಪ್ರದಾಯಗಳಾಗುವುದುಂಟು.

ಜನಪದ ನಂಬಿಕೆಗಳಲ್ಲಿ ಅನೇಕವು ಮೂಢ ನಂಬಿಕೆಗಳು. ಇವು ಸಾಮೂಹಿಕ ಅಭ್ಯಾಸಗಳಾಗಿದ್ದು ಇದಕ್ಕೆ ವಿವೇಚನೆಯ ಆಧಾರವಾಗಲೀ ಋಣಭಾರಭಾವವಾಗಲೀ ಇರುವುದಿಲ್ಲ. ವರ್ಜಿಲ್ ಹೇಳುವಂತೆ ಮೂಢನಂಬಿಕೆ ಒಂದು ಆಧಾರರಹಿತ ಪದ್ಧತಿ ಅಥವಾ ನಂಬಿಕೆ. ಸಮಾಜದಲ್ಲಿನ ವ್ಯಕ್ತಿಯನ್ನು ಅದು ಒಪ್ಪುವಂತೆ ಮಾಡುತ್ತದೆ. ಮಾಂತ್ರಿಕ ವಿಷಯ ಹಾಗೂ ಅಗೋಚರ ಶಕ್ತಿಗಳಲ್ಲಿ ನಂಬಿಕೆ ಇಡುವಂತೆ ಮಾಡುವುದಲ್ಲದೆ ಜನರನ್ನು ಸತತ ಭಯಭೀತರನ್ನಾಗಿ ಮಾಡುವ ಶಕ್ತಿ ಮೂಢ ನಂಬಿಕೆಗಳಿಗಿದೆ. ಕೆಲವು ನಂಬಿಕೆಗಳಲ್ಲಿ ವೈಜ್ಞಾನಿಕ ಸತ್ಯ, ಸಾಮಾನ್ಯಜ್ಞಾನ, ಪೌರಾಣಿಕ, ಐತಿಹ್ಯಾಂಶಗಳು ಹಾಗೂ ಕಥಾಂಶಗಳೂ ಅಡಕವಾಗಿವೆ. ಇಂಥ ನಂಬಿಕೆಗಳು ಮಾನವನ ಬದುಕಿನ ಹಿನ್ನೆಲೆಯಲ್ಲಿ ರೂಪುಗೊಂಡು ಅವನ ಎಲ್ಲ ಕಾರ್ಯಕ್ಷೇತ್ರವನ್ನೂ ವ್ಯಾಪಿಸಿಕೊಂಡಿರುತ್ತವೆ.

ನಂಬಿಕೆಗಳಲ್ಲಿ ಸಾಮಾನ್ಯವಾಗಿ ಎರಡು ಆದೇಶಗಳಿರುತ್ತವೆ. ಒಂದು ಕ್ರಿಯೆಗೆ ಸಂಬಂಧಪಟ್ಟದ್ದು ಮತ್ತೊಂದು ಭಾವನೆಗೆ. ಪ್ರಯಾಣಕ್ಕೆ ಹೊರಟಾಗ ಖಾಲಿ ಕೊಡ ಸಿಕ್ಕಿದರೆ ಅದು ಅಶುಭ ಎಂದು ಎಣಿಸುವುದು ಭಾವನೆಯಾದರೆ ಪ್ರಯಾಣವನ್ನು ರದ್ದುಮಾಡಿ ಮನೆಗೆ ಹಿಂದಿರುಗುವುದು ಕ್ರಿಯೆಯಾಗುತ್ತದೆ.

ಪ್ರತಿಯೊಂದು ಜನಾಂಗದಲ್ಲೂ ತನ್ನದೇ ಆದ ನಂಬಿಕೆಗಳು ನೆಲೆಗೊಂಡಿವೆ. ಕೆಲವು ನಂಬಿಕೆಗಳು ಜಗತ್ತಿನಾದ್ಯಂತ ಒಂದೇ ಆಗಿರುತ್ತದೆ. ಉದಾಹರಣೆಗೆ ಮೂರು ಜನರು ಒಂದೇ ಬೆಂಕಿಕಡ್ಡಿಯಿಂದ ಬೀಡಿ ಅಥವಾ ಸಿಗರೇಟನ್ನು ಹಚ್ಚಿಕೊಳ್ಳಬಾರದು ಎಂಬುದು ಪ್ರಪಂಚದ ಎಲ್ಲ ಕಡೆಯಲ್ಲೂ ಉಳಿದುಬಂದಿರುವ ನಂಬಿಕೆ. ಮತ್ತೆ ಕೆಲವು ನಂಬಿಕೆಗಳಲ್ಲಿ ಭಾವನೆ ಒಂದೇ ಆಗಿದ್ದರೂ ರೂಪ ಬೇರೆಯದಾಗಿರುತ್ತದೆ. ಕ್ರೈಸ್ತರು ಕಷ್ಟಬಂದಾಗ ನಿವಾರಣೆಗೆಂದು ಬೈಬಲ್ಲನ್ನು ಓದಿದರೆ ನಮ್ಮ ಜನಪದರು ಶನಿಮಹಾತ್ಮೆಯನ್ನೋ ಕುಮಾರವ್ಯಾಸ ಭಾರತವನ್ನೋ ಓದಿ ಕೇಳಿ ಮಾಡುತ್ತಾರೆ. ಮನೆ ಭದ್ರವಾಗಿ ನಿಲ್ಲಬೇಕಾದರೆ ತಳಹದಿಗೆ ಮಕ್ಕಳನ್ನು ಬಲಿಕೊಡಬೇಕು, ಕೆರೆಗೆ ಹಾರ ಕೊಟ್ಟರೆ ಕೆರೆಯ ಏರಿ ಒಡೆಯುವುದಿಲ್ಲ ಎಂಬ ಮೂಢ ನಂಬಿಕೆಗಳು ವಿಶ್ವದ ಅದ್ಯಂತ ನೆಲೆಸಿರುವುದರಿಂದ ಮೂಲತಃ ಮಾನವನ ಸಂಸ್ಕøತಿ, ಆಲೋಚನಾಶಕ್ತಿ ಒಂದೇ ರೀತಿಯದು ಆಗಿದ್ದಿರಬೇಕು ಎನಿಸದಿರಲಾರದು.

ನಂಬಿಕೆಗಳಿಗೆ ಸಾರ್ವತ್ರಿಕತೆ ಮತ್ತು ಪ್ರಾದೇಶಿಕತೆಯಿದೆ. ಅವು ಎಲ್ಲೆಡೆ ಇದ್ದರೂ ಒಂದೇ ರೀತಿಯವುಗಳಲ್ಲ. ಪರಸ್ಪರ ಸಾಮರಸ್ಯವಿದ್ದರೂ ಅಲ್ಪಸ್ವಲ್ಪ ವ್ಯತ್ಯಾಸವಿರುತ್ತದೆ. ಇದಕ್ಕೆ ಆಯಾದೇಶಗಳ ಆಚಾರ-ವಿಚಾರಗಳೇ ಕಾರಣ. ಗೂಬೆ ಭಾರತದಲ್ಲಿ ಅಪಶಕುನದ ಸಂಕೇತವಾದರೆ ಪಾಶ್ಚಾತ್ಯರಿಗೆ ಅದು ವಿವೇಕದ ಪ್ರತೀಕ.

ನಂಬಿಕೆಗಳ ಹುಟ್ಟು ಮಾನವನ ಹುಟ್ಟಿನೊಡನೆ ಆಯಿತೆನ್ನಬಹುದು. ಪ್ರಕೃತಿ ಶಕ್ತಿಗಳೇ ನಂಬಿಕೆಗಳ ಹುಟ್ಟಿಗೆ ಮೂಲಕಾರಣವಾದುವು. ನೈಸರ್ಗಿಕ ರೋಷಶಕ್ತಿಗಳಾದ ಗುಡುಗು-ಸಿಡಿಲು, ಮಿಂಚು-ಮಳೆ, ಅಗ್ನಿ-ಬಿರುಗಾಳಿ ಆದಿಮಾನವನ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿದವು. ಒಮ್ಮೆ ಅವನ್ನು ಕಂಡು ಸೋಜಿಗ, ಮತ್ತೊಮ್ಮೆ ಭಯ. ಹೀಗಾಗಿ ಅವನಲ್ಲಿ ಒಂದು ರೀತಿಯ ಮಾನಸಿಕ ತುಮುಲವೇರ್ಪಟ್ಟು ಕೊನೆಗೊಮ್ಮೆ ಅಂಥ ಶಕ್ತಿಗಳ ಸಹಜತೆಯನ್ನು ಅರಿಯಲು ಅಶಕ್ತನಾದಾಗ ಶರಣಾಗತಿಯೊಂದೇ ಅವನಿಗೆ ಉಳಿದ ಮಾರ್ಗ. ಕ್ರಮೇಣ ಎಲ್ಲ ಶಕ್ತಿಗಳಿಗೂ ಒಂದು ರೂಪವನ್ನು ಆತ ಕೊಟ್ಟು ಪೂಜಿಸಲಾರಂಭಿಸಿದ. ಅವನ್ನು ಸಂಪ್ರೀತಗೊಳಿಸಲು ಪ್ರಾಣಿಗಳನ್ನು ಬಲಿಕೊಟ್ಟ. ಯಜ್ಞಯಾಗಾದಿಗಳಲ್ಲಿ ನಂಬಿಕೆ ಇಟ್ಟ. ಹೀಗಾಗಿ ಅವನ ಪ್ರತಿ ಹೆಜ್ಜೆಯಲ್ಲೂ ನಂಬಿಕೆಗಳೂ ತಲೆದೋರಿದವು. ಇಂಥ ನಂಬಿಕೆಗಳ ಸಂಕಲನವೇ ಮೂಲಧರ್ಮವಾಯಿತು. ಧಾರ್ಮಿಕ ನಂಬಿಕೆಗಳೇ ಜಾನಪದ ಅಧ್ಯಾಯಾರಂಭಕ್ಕೆ ಮೊದಲಾಗಿರಬೇಕು. ಕಾಲಕಳೆದಂತೆ ಮಾನವನ ಮನೋಭಾವನೆಗಳು ವಿಕಾಸಗೊಂಡು ಅದಕ್ಕೆ ತಕ್ಕಂತೆ ನಂಬಿಕೆಗಳು ಹುಟ್ಟಿದವು. ಕ್ಲಿಷ್ಟವಾದ ಮತ್ತು ಹೆಚ್ಚು ಕರ್ಮಯುಕ್ತವಾದ ಆಚಾರಗಳು ಬದಲಾಗಿ ಹೊಸ ಹೊಸ ನಂಬಿಕೆಗಳು ತಲೆದೋರಿದವು.

ಜನಪದ ನಂಬಿಕೆಗಳ ಉಗಮ ಮುಖ್ಯವಾಗಿ ಮೂರು ರೀತಿಯಲ್ಲಿ ಆಯಿತೆನ್ನಬಹುದು-ಧಾರ್ಮಿಕ, ಸಾಂಸ್ಕøತಿಕ ಹಾಗೂ ವೈಯಕ್ತಿಕ. ಧಾರ್ಮಿಕ ನಂಬಿಕೆಗಳು ಭಯದಿಂದ ಹುಟ್ಟಿದವು. ಮನಸ್ಸಿನ ಅಸ್ಥಿರತೆ ಮತ್ತು ಅತಿಮಾನುಷಭಯ ಈ ವರ್ಗದ ನಂಬಿಕೆಗಳ ಹುಟ್ಟಿಗೆ ಮುಖ್ಯ ಕಾರಣ.

ಧಾರ್ಮಿಕ ನಂಬಿಕೆಗಳ ಮುಂದಿನ ಹಂತದಲ್ಲಿ ಸಾಂಸ್ಕøತಿಕ ನಂಬಿಕೆಗಳು ಹುಟ್ಟಿದವು. ಜನ ತಮ್ಮ ಸಂಸ್ಕøತಿಯನ್ನು ರೂಪಿಸಿಕೊಳ್ಳುವಾಗ ಅವರ ಚಟುವಟಿಕೆಗಳಿಗೆ ತಕ್ಕಂತೆ ಈ ರೀತಿಯ ನಂಬಿಕೆಗಳು ರೂಪತಾಳಿದವು. ಈ ಬಗೆಯ ನಂಬಿಕೆಗಳು ವಿಶೇಷವಾಗಿ ನಿತ್ಯ ಬದುಕಿನಲ್ಲಿ ಕಂಡುಬರುವ ನಡಾವಳಿಗಳ ಕಟ್ಟುಕಟ್ಟಳೆಗಳನ್ನು ಕುರಿತದ್ದಾಗಿವೆ; ಬದುಕನ್ನು ನಿಯಂತ್ರಿಸುವ ಸೂತ್ರಗಳಾಗಿ ಸಾರ್ವತ್ರಿಕವಾಗಿ ಹಬ್ಬಿಕೊಂಡಿವೆ. ವಿಧವೆ ಶುಭಕಾರ್ಯಗಳಲ್ಲಿ ಭಾಗವಹಿಸಬಾರದು ಎಂಬುದನ್ನು ಸಮಾಜ ಒಪ್ಪಿರುವುದರಿಂದ ಅದು ಆಚರಣೆಯಲ್ಲಿದ್ದು ನಮ್ಮ ಸಂಸ್ಕøತಿಯಲ್ಲಿ ಸೇರಿದ ಒಂದು ನಂಬಿಕೆಗಳು ಉಳಿದುಬಂದಿದೆ.

ವೈಯಕ್ತಿಕ ನಂಬಿಕೆಗಳು ಧಾರ್ಮಿಕ ಹಾಗೂ ಸಾಂಸ್ಕøತಿಕ ನಂಬಿಕೆಗಳ ಸಂಸ್ಕಾರದಿಂದ ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಸಾರ್ವತ್ರಿಕವಾದರೂ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಬಹುದು. ಒಬ್ಬನಿಗೆ ಮಂಗಳವಾರ ಅಶುಭವಾದರೆ ಮತ್ತೊಬ್ಬನಿಗೆ ಶುಭವಾಗಬಹುದು. ಒಬ್ಬನಿಗೆ ಒಂದು ಅಂಕಿ ಅದೃಷ್ಟಸಂಖ್ಯೆಯಾದರೆ ಮತ್ತೊಬ್ಬನಿಗೆ ದುರದೃಷ್ಟದ ಸಂಕೇತವಾಗಬಹುದು. ಈ ಬಗೆಯ ನಂಬಿಕೆಗಳಲ್ಲಿ ಬಾಳಿನ ಅನುಭವ ಹಾಗೂ ಮಾನಸಿಕ ಅನುಭವಗಳ ಮಿಳಿತವನ್ನು ಕಾಣಬಹುದು. ಯಾವ ಗಳಿಗೆಯಲ್ಲಿ ಅವಳು ನನ್ನ ಮನೆಗೆ ಹೆಜ್ಜೆ ಇಟ್ಟು ಬಂದಳೊ ನನ್ನ ಮನೆ ಬಂಗಾರವಾಯಿತು ಎಂದು ಸೊಸೆ ಮನೆಗೆ ಬಂದ ಅನಂತರ ಮನೆಯ ಪರಿಸ್ಥಿತಿ ಸುಧಾರಿಸಿದ್ದನ್ನು ಕಂಡು ಅವಳ ಮಾವ ಹೇಳಿಕೊಳ್ಳಬಹುದು. ವೈಯಕ್ತಿಕ ನಂಬಿಕೆಗಳು ಕೆಲವೊಮ್ಮೆ ಮಾರಕವಾಗುವುದುಂಟು. ಮಹತ್‍ಕಾರ್ಯಕ್ಕೆಂದು ಹೊರಟವನು ಅಪಶಕುನವಾಯಿತೆಂದು ಹಿಂದಿರುಗುವುದರಿಂದ ನಷ್ಟವನ್ನು ಅನುಭವಿಸಬಹುದು. ದೇವರೇ ತನ್ನ ರೋಗವನ್ನು ವಾಸಿಮಾಡುತ್ತಾನೆಂದು ನಂಬಿ ವೈದ್ಯನನ್ನು ಕಾಣದವ ಪ್ರಯತ್ನಮಾಡದೆ ಪ್ರಾಣವನ್ನೇ ಕಳೆದುಕೊಳ್ಳಬಹುದು.

ಜನಪದ ನಂಬಿಕೆಗಳು ತಪ್ಪುಗ್ರಹಿಕೆಯಿಂದಲೂ ಹುಟ್ಟುತ್ತವೆ. ವಿಚಾರಶಕ್ತಿ ಕಡಿಮೆ ಇರುವವರು, ಮನೋದೌರ್ಬಲ್ಯವುಳ್ಳವರು, ಸಮಾಜದಲ್ಲಿ ಪ್ರಭಾವಿತವ್ಯಕ್ತಿಗಳಾಗಿದ್ದರೆ, ಅಂಥವರು ನಂಬಿಕೆಗಳ ಹುಟ್ಟಿಗೆ ಕಾರಣರಾಗುತ್ತಾರೆ. ಪೋಪರು ತಾವು ದೇವದೂತರೆಂದು ಹೇಳಿಕೊಳ್ಳುತ್ತಿದ್ದರು. ಅವರು ಹೇಳಿದ್ದನ್ನೆಲ್ಲ ಮುಗ್ಧ ಜನಗಳು ನಂಬಿ ಪಾಲಿಸುತ್ತಿದ್ದರು. ಸಮಾಜದ ಒತ್ತಡಕ್ಕೆ ಮಣಿದು ಅಪ್ರಯತ್ನ ಪೂರ್ವಕವಾಗಿ ಕೆಲವು ನಂಬಿಕೆಗಳು ಜೀವನದಲ್ಲಿ ಅಡಕವಾಗುತ್ತವೆ.

ನಂಬಿಕೆಗಳನ್ನು ವೈಜ್ಞಾನಿಕ, ಅವೈಜ್ಞಾನಿಕ ಎಂದು ವಿಭಜಿಸಬಹುದು. ಈ ರೀತಿಯ ವಿಭಜನೆಯಡಿಯಲ್ಲಿ ಎಲ್ಲ ತರಹದ ನಂಬಿಕೆಗಳನ್ನೂ ಸೇರಿಸಲು ಆಸಾಧ್ಯವಾದ್ದರಿಂದ ವಿಭಜನೆ ಅಸಮರ್ಪಕವಾಗುತ್ತದೆ. ಎಲ್ಲ ನಂಬಿಕೆಗಳಲ್ಲೂ ವೈಜ್ಞಾನಿಕ ಅಂಶ ದೊರೆಯುವುದಿಲ್ಲ. ಕೆಲವು ಅವೈಜ್ಞಾನಿಕ ನಂಬಿಕೆಗಳಲ್ಲಿ ನಂಬಿಕೆ ಇಡುವುದರಿಂದ ಮಾನಸಿಕ ತೃಪ್ತಿಯಾದರೂ ದೊರೆಯಬಹುದು. ಉದಾಹರಣೆಗೆ ಪಿತೃಪಕ್ಷವನ್ನು ಆಚರಿಸುವುದರಿಂದ ಸತ್ತವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ; ಅವರು ಪದೇ ಪದೇ ಬಂದು ಪೀಡಿಸುವುದಿಲ್ಲ-ಎಂದು ನಂಬುವುದರಲ್ಲಿ ವೈಜ್ಞಾನಿಕ ಸತ್ಯವಿಲ್ಲದಿದ್ದರೂ ಅಂಥ ಆಚರಣೆಗಳಿಂದ ಮಾನಸಿಕ ಸಂತೃಪ್ತಿ ದೊರೆಯುತ್ತದೆ.

ವೈಜ್ಞಾನಿಕ ಸತ್ಯವನ್ನೊಳಗೊಂಡ ನಂಬಿಕೆಗಳಂತೂ ಬಹಳಷ್ಟಿವೆ. ಊಟಕ್ಕೆ ಕುಳಿತಾಗ ತಟ್ಟೆ ಅಥವಾ ಎಲೆಯ ಸುತ್ತಲೂ ನೀರನ್ನು ಚುಮುಕಿಸಬೇಕು ಎಂಬ ನಂಬಿಕೆಯಿಂದ ಸಣ್ಣಕೀಟಕ್ರಿಮಿಗಳಿಂದ ತಟ್ಟೆಯ ಒಳಗೆ ಹರಿದು ಬರುವುದನ್ನು ತಡೆಗಟ್ಟಬಹುದು. ಉಗುರು ನೀರನ್ನು ಹಾರಿಸಬಾರದು ಹಾರಿಸಿದರೆ ಉಗುರು ಸುತ್ತಾಗುತ್ತದೆ ಎಂಬಲ್ಲಿ ಇರುವ ಸತ್ಯವಿಷ್ಟು : ಉಗುರು ಒಂದು ವಿಷವಸ್ತು ಸಂದುಗಳಲ್ಲಿ ಕೊಳೆ ಸೇರಿರುತ್ತದೆ. ಇದನ್ನು ಬೇರೆಯವರಿಗೆ ಹಾರಿಸುವುದರಿಂದ ಅವರಿಗೆ ಹಾನಿಯಾಗಬಹುದು ಅಂತೆಯೇ ಬೇರೆಯವರ ಚಪ್ಪಲಿಗಳನ್ನು ಮೆಟ್ಟಬಾರದು ; ಬೇರೆಯವರ ಬಟ್ಟೆಯನ್ನು ಬಳಸಬಾರದು ಎಂಬಲ್ಲಿ ಚರ್ಮರೋಗವನ್ನು ತಡೆಗಟ್ಟಬಹುದು ಎಂಬ ಸತ್ಯವನ್ನು ಕಾಣಬಹುದು.

ಕೆಲವು ನಂಬಿಕೆಗಳಲ್ಲಿ ವೈದ್ಯಕೀಯ ಸಂಗತಿಗಳು ಅಡಕವಾಗಿವೆ. ಅಜೀರ್ಣದಿಂದ ಹೊಟೆ ಉಬ್ಬರಿಸಿಕೊಂಡು ನೋವು ಕಾಣಿಸಿಕೊಂಡರೆ ಬೆಂಬೂದಿ (ಬೆಚ್ಚನೆಯ ಬೂದಿ) ತಿಕ್ಕಿದರೆ ಸರಿಯಾಗುತ್ತದೆ ಎಂಬಲ್ಲಿ ಆ ರೀತಿ ಮಾಡುವುದರಿಂದ ಪಚನಕ್ರಿಯೆ ಚೇತನಗೊಂಡು ನೋವು ಕಡಿಮೆಯಾಗಬಹುದು. ತಲೆನೋವು ಬಂದರೆ ಚಿಟಿಕೆ (ಗಾಜಿನ ಬಳೆಚೂರಿನಿಂದ ಗಂಡಸ್ಥಲದ ನರಗಳನ್ನು ಸುಡುವುದು) ಹಾಕಿದರೆ ವಾಸಿಯಾಗುತ್ತದೆ ಎಂಬ ನಂಬಿಕೆ ಚೀನದಲ್ಲಿರುವ ಅಕ್ಯೂ ಪಂಕ್ಚರ್ ವೈದ್ಯಪದ್ಧತಿಯನ್ನು ನೆನಪಿಗೆ ತರುತ್ತದೆ. ನಿಗದಿಯಾದ ಜಾಗದಲ್ಲಿ ಚಿಟಿಕೆ ಹಾಕುವುದರಿಂದ ನರದ ಮೇಲೆ ಒಂದೆಡೆ ಸಂಗ್ರಹವಾಗಿದ್ದ ವಿಷವಸ್ತುಗಳು ಕ್ರಿಯೆಯ ವರ್ಧನೆಯಿಂದ ಬೇರೆಲ್ಲೆಡೆಗೆ ಸಾಗಿಸಲ್ಪಟ್ಟು ನೋವು ಕಡಿಮೆಯಾಗಬಹುದು.
ಪ್ರಕೃತಿಯೊಡನಿರುವ ಸತತ ಸಂಪರ್ಕದಿಂದಾಗಿ ರೈ ಅದರಲ್ಲಾಗುವ ಬದಲಾವಣೆಗಳನ್ನು ಗಮನಿಸಿ ಕೆಲವು ನಂಬಿಕೆಗಳನ್ನು ಹೇಳುತ್ತಾನೆ. ಇವು ಕೆಲವೊಮ್ಮೆ ಸತ್ಯವಾಗುವುದುಂಟು. ಕೋಟೆ ಮುಗಿಲೆದ್ದರೆ ಮಳೆಯಾಗುತ್ತದೆ. ಸೂರ್ಯ ಗುಡಿಕಟ್ಟಿದರೆ (ಪ್ರಭಾವಳಿ ಸುತ್ತುಗಟ್ಟಿದರೆ) ಸೂರೆಲ್ಲ ಮಳೆ. ಕೊಡತಿ ಹುಳು ಕಾಣಿಸಿಕೊಂಡರೆ ಮಳೆಯಾಗುತ್ತದೆ. ತಿಂಗಳು (ಚಂದ್ರ) ಗುಡಿಕಟ್ಟಿದರೆ ತಿಂಗಳು ಮಳೆಯಿಲ್ಲ. ಈ ನಂಬಿಕೆಗಳಿಗೂ ವಾತಾವರಣದಲ್ಲಾಗುವ ಬದಲಾವಣೆಗಳಿಗೂ ಏನೋ ಸಂಬಂಧವಿರಬೇಕು. ಅದರ ಆಂತರಿಕ ಸತ್ಯಾಸತ್ಯಗಳ ವಿವೇಚನೆ ರೈತರಿಗೆ ಇಲ್ಲವಾದರೂ ಅವು ಪರಂಪರಾನುಗತವಾಗಿ ಅನುಭವದಿಂದ ಬಂದುವುಗಳಾದ್ದರಿಂದ ಅಂಥ ನಂಬಿಕೆಗಳಲ್ಲಿ ಪೂರ್ಣವಿಶ್ವಾಸ ಇಟ್ಟಿದ್ದಾರೆ.
ನಂಬಿಕೆಗಳ ಮತ್ತೊಂದು ರೀತಿಯ ವಿಭಜನಕ್ರಮವೆಂದರೆ ಅತಿಮಾನುಷ, ಮಾನುಷ, ಪ್ರಾಣಿ, ಪ್ರಕೃತಿ, ಕೌಟುಂಬಿಕ ಹಾಗೂ ಸಂಕೀರ್ಣ ಸಂಬಂಧದವು ಎಂದೊಡೆಯುವುದು. ಈ ಪ್ರಕಾರಗಳ ನಡುವಿನ ಎಲ್ಲೆಯನ್ನು ಗುರುತಿಸುವಾಗ ಅಸ್ಪಷ್ಟತೆ ಕಾಣಬಂದರೂ ಎಲ್ಲ ರೀತಿಯ ನಂಬಿಕೆಗಳನ್ನೂ ವಿಷಯಪ್ರಧಾನತೆಯ ಆಧಾರದ ಮೇಲೆ ಸಮರ್ಪಕವಾಗಿ ವಿಗಂಡಿಸಬಹುದೆಂದು ತೋರುತ್ತದೆ.

ದೆವ್ವ. ಪೀಡೆ, ದೇವರುಗಳ ಬಗ್ಗೆ ಇರುವ ನಂಬಿಕೆಗಳು ಅತಿಮಾನುಷ ಗುಂಪಿನಲ್ಲಿ ಸೇರುತ್ತವೆ. ಪೂರ್ಣಿಮೆ ಅಮಾವಾಸ್ಯೆಯಲ್ಲಿ ದೆವ್ವಗಳ ಸಂಚಾರಹೆಚ್ಚು. ಜುಟ್ಟಿಲ್ಲದ ತೆಂಗಿನ ಕಾಯನ್ನು ದೇವರಿಗೆ ಒಡೆಯಬಾರದು. ಹುಣಿಸೆಮರದಲ್ಲಿ ದೆವ್ವಗಳು ವಿಪರೀತ. ದೇವರ ದೀಪವನ್ನು ಒಂದೇ ಬಾರಿಗೆ ಆರಿಸಬಾರದು, ಮೂರನೆ ಬಾರಿಗೆ ಆರಿಸಬೇಕು. ಇಂಥ ನಂಬಿಕೆಗಳು ಸಾಮಾನ್ಯವಾಗಿ ಅತಿಮಾನುಷ ಭಯದಿಂದ ಹುಟ್ಟಿದ ಮನಸ್ಸಿನ ಅಸ್ಥಿರಭಾವನೆಗಳು; ಮನಸ್ಸಿನ ಅಂಗೀಕಾರ ಮುದ್ರೆ ಧರಿಸಿ ಸಮಾಜದಲ್ಲಿ ಬಳಕೆಯಲ್ಲಿವೆ.
ಹಬ್ಬಹರಿದಿನಗಳು, ಹುಟ್ಟು-ಸಾವು, ಕಾಲ, ಕನಸು-ನಿದ್ರೆ, ವಾರಗಳನ್ನು, ಒಡಹುಟ್ಟಿದವರು, ವಿವಾಹ, ಪುರುಷ ಹಾಗೂ ಸ್ತ್ರೀದೇಹಗಳಿಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ನಂಬಿಕೆಗಳನ್ನು ಮಾನುಷಗುಂಪಿನಲ್ಲಿ ಸೇರಿಸಬಹುದು. ಈ ಗುಂಪಿನಲ್ಲಿ ವೈಯಕ್ತಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳು ಸೇರುತ್ತವೆ. ವರ್ಷಕ್ಕೊಂದು ಬರುವ ಹಬ್ಬದ ದಿನ ಮಕ್ಕಳನ್ನು ಹೊಡೆಯಬಾರದು. ತೊಲೆಗಳ ಕೆಳಗೆ ಮಲಿಗಿದರೆ ಕನಸುಗಳು ಜಾಸ್ತಿ. ಸಂಜೆಯಾದ ಮೇಲೆ ಅಂಗಡಿಯಿಂದ ಅಥವಾ ಮನೆಯಿಂದ ಹೊರಗಡೆಗೆ ಸೀಗೆಕಾಯಿಪುಡಿ, ಅರಿಶಿನ ಕೊಡಬಾರದು. ಹೊತ್ತುಮುಳುಗಿದ ಮೇಲೆ ಅಕ್ಕಿ ತಿನ್ನಬಾರದು. ಇತ್ಯಾದಿಗಳು ಈ ವಿಭಾಗಕ್ಕೆ ಸೇರುತ್ತವೆ. ವಾರಗಳನ್ನು ಕುರಿತ ನಂಬಿಕೆಗಳಿವೆ. ಸಾಮಾನ್ಯವಾಗಿ ಮಂಗಳವಾರ ಅಶುಭ. ಶನಿವಾರ ಹೊಸ ಬಟ್ಟೆ ಹಾಕಬಾರದು. ಶುಕ್ರವಾರ ಸೊಸೆ ಕಳುಹಿಸಬಾರದು. ಮಂಗಳವಾರ ಮಗಳು ಕಳುಹಿಸಬಾರದು. ಹುಟ್ಟಿದ ವಾರದಲ್ಲಿ ತಲೆಕೂದಲು ತೆಗೆಸಬಾರದು, ಇತ್ಯಾದಿ, ಮಾನವನ ಅಂಗಾಂಗಗಳಲ್ಲಿನ ಕುರುಹು ಅಥವಾ ಕೆಲವು ನ್ಯೂನತೆಗಳನ್ನು ಕುರಿತು ಅವನ ಅದೃಷ್ಟವನ್ನು ನುಡಿಯುತ್ತಾರೆ. ಆರು ಬೆರಳಿದ್ದವರು, ಮಾಲುಗಣ್ಣಿನವರು ಅದೃಷ್ಟವಂತರಂತೆ. ಮೂಗು ಉದ್ದವಿದ್ದರೆ ಪುಣ್ಯವಂತ. ಕಣ್ಣು ಸಣ್ಣಗಿದ್ದರೆ ಬುದ್ಧಿವಂತ. ಹಸ್ತದಲ್ಲಿ ಗರುಡಮಚ್ಚೆ ಇದ್ದವರನ್ನು ಹಾವು ಕಚ್ಚುವುದಿಲ್ಲವಂತೆ. ದೇಹದಲ್ಲಿ ಆಗುವ ಕೆಲವು ಆಕಸ್ಮಿಕ ಚಲನೆಗಳನ್ನು ಕುರಿತ ಕೆಲವು ನಂಬಿಕೆಗಳಿವೆ. ಉದಾಹರಣೆಗೆ ಹಣೆ ಅದುರಿದರೆ ಶುಭ. ಬಲಭುಜ ಅದುರಿದರೆ ಸಂಭೋಗ ಸುಖ. ಎಡಭುಜ ಅದುರಿದರೆ ಕೇಡು. ಬೆನ್ನು ಅದುರಿದರೆ ಧನ ಸಿಗುತ್ತದೆ. ಇತ್ಯಾದಿ.

ಮಾನವನ ಜೀವನದಲ್ಲಿ ಮದುವೆ ಒಂದು ಪ್ರಮುಖ ಘಟನೆ. ಇದಕ್ಕೆ ಸಂಬಂಧಿಸಿದ ನೂರಾರು ನಂಬಿಕೆಗಳು ಪ್ರಚಲಿತವಿವೆ. ಅನೇಕ ಮದುವೆಗಳು ನಡೆಯುವುದೇ ನಂಬಿಕೆಗಳಿಂದ. ವಿವಾಹದ ದಿನ ಮಳೆಬಂದರೆ ಗಂಡು ಅಥವಾ ಹೆಣ್ಣು ಅಕ್ಕಿ ತಿಂದಿದ್ದಾರೆಂದು ಹೇಳುತ್ತಾರೆ. ಲಗ್ನ ಕಟ್ಟಿಸಿದ ದಿನದಿಂದ ಮದುವೆ ಮುಗಿಯುವ ವರೆಗೆ ಮನೆಯಲ್ಲಿ ಮಾಂಸ ಮಾಡಬಾರದು. ಮದುವೆಯಾದ ವರ್ಷ ಮನೆ ಕಟ್ಟಬಾರದು, ಇತ್ಯಾದಿ.

ಪ್ರಾಣಿಸಂಬಂಧ ನಂಬಿಕೆಗಳಲ್ಲಿ ಅವುಗಳ ಚತುರತೆ, ಮಾನವನ ಅನುಕಂಪೆ, ಅವುಗಳಿಂದ ಬರುವ ಅನಿಷ್ಟವನ್ನು ಕಾಣಬಹುದು. ಇರುವೆಗೂಡಿಗೆ ಅಕ್ಕಿ ಬೆಲ್ಲ ಹಾಕಿದರೆ ಪುಣ್ಯಬರುತ್ತದೆ. ಕೊತ್ತಿ ಸಾಯಿಸಿದರೆ ಕಾಶಿಗೆ ಹೋದರೂ ಪಾಪ ಕಳೆಯುವುದಿಲ್ಲ. ಇವು ಅವುಗಳ ಮೇಲಿನ ಮಮತೆ, ಅನುಕಂಪೆಯನ್ನು ತೋರುತ್ತವೆ. ನಡುರಾತ್ರಿಯಲ್ಲಿ ನಾಯಿಗಳು ಒಟ್ಟಿಗೆ ಬೊಗಳಲಾರಂಭಿಸಿದರೆ ಯಾರಾದರೂ ಸಾಯುತ್ತಾರೆ ಎಂಬ ನಂಬಿಕೆ ಅನಿಷ್ಟವನ್ನು ಸೂಚಿಸುತ್ತದೆ. ಪ್ರಾಣಿನಂಬಿಕೆಗಳಲ್ಲಿ ಭವಿಷ್ಯವಾಚನಗಳು ಬಹಳಷ್ಟಿವೆ. ಇದರಲ್ಲಿ ಶಕುನಗಳು ಸಾಮಾನ್ಯವಾಗಿ ಪ್ರಯಾಣಕ್ಕೆ ಸಂಬಂಧಿಸಿದವುಗಳು. ಪ್ರಯಾಣದಲ್ಲಿ ಹಾವು ಎಡದಿಂದ ಬಲಕ್ಕೆ ಬಂದರೆ ಒಳ್ಳೆಯದು. ಹಲ್ಲಿ ಬಲದಿಂದ ತಲೆಯ ಮೇಲೆ ನುಡಿದರೆ ಶುಭ. ನರಿ ಆಗ್ನೇಯ ದಿಕ್ಕಿನಲ್ಲಿ ಕೂಗಿದರೆ ಅಶುಭ. ಗೂಬೆ ಊರೊಳಗೆ ಬಂದು ಕೂಗಿದರೆ ಯಾರಾದರೂ ಸಾಯುತ್ತಾರೆ. ಬೆಕ್ಕು ಅಡ್ಡಲಾಗಿ ಎಡದಿಂದ ಬಲಕ್ಕೆ ಹೋದರೆ ಶುಭ. ಬಲದಿಂದ ಎಡಕ್ಕೆ ಹೋದರೆ ಅಶುಭ. ಹೀಗೆಂದು ಹೇಳುವುದುಂಟು.

ಪ್ರಕೃತಿಯನ್ನು ಕುರಿತ ನಂಬಿಕೆಗಳಲ್ಲಿ ಗಿಡ ಮರ, ಫಲ ಹೂವುಗಳಿಗೆ ಸಂಬಂಧಿಸಿದ ವಿಷಯಗಳು ಬರುತ್ತವೆ. ಫಲಬಿಡುವ ಮರ ಕಡಿಯಬಾರದು. ಅರಳಿಮರ ಕಡಿಯಬಾರದು. ಮುಂತಾದುವು. ಇಂಥ ನಂಬಿಕೆಗಳಿಗೆ ಬಹುಶಃ ಅರಳಿಮರ ದೊಡ್ಡದಾಗಿದ್ದು ದಾರಿಹೋಕರಿಗೆ ನೆರಳನ್ನು ನೀಡುತ್ತದೆ. ಹಾಗೆಯೇ ಫಲಬಿಡುವ ಮರ ಮನುಷ್ಯನಿಗೆ ಉತ್ಕøಷ್ಟ ಹಣ್ಣುಗಳನ್ನು ಕೊಡುತ್ತದೆ ಎಂಬುದು ಕಾರಣವಿಬೇಕು. ಅದೇ ರೀತಿ ಎಳ್ಳನ್ನು ಹಣಕೊಟ್ಟು ಕೊಳ್ಳಬೇಕು ಎಂಬ ನಂಬಿಕೆಯಲ್ಲಿ ಅಡಗಿರುವ ಸತ್ಯಾಂಶ ಎಳ್ಳು ಅಪರೂಪದ ಬೆಳೆಯಾಗಿದ್ದು ಹೆಚ್ಚಿಗೆ ಬೆಳೆಯುವುದೇ ದುರ್ಲಭ. ಇದನ್ನು ಸರಿಯಾದ ಬೆಲೆಯಿಲ್ಲದೆ ಕೊಡಲು ಸಾಧ್ಯವಾಗುವುದಿಲ್ಲ ಎಂಬ ಉದ್ದೇಶ ಇರಬಹುದು.

ಕೌಟುಂಬಿಕ ನಂಬಿಕೆಗಳೆಲ್ಲ ಅಡಿಗೆ, ಊಟ ಮತ್ತು ಕುಟುಂಬದ ವಿಷಯಗಳಿಗೆ ಸಮಬಂಧಿಸಿದವುಗಳು. ಊಟದ ತಟ್ಟೆಯನ್ನು ಕಾಲಿನಿಂದ ಒದೆಯಬಾರದು. ಎಂಜಲು ತಟ್ಟೆಯನ್ನು ದಾಟಬಾರದು. ದಾಟಿದರೆ ಊಟಮಾಡಿದವನಿಗೆ ಹೊಟ್ಟೆ ನೋವು ಬರುತ್ತದೆ. ತುತ್ತು ತೂಕಮಾಡಬಾರದು. ಇತ್ಯಾದಿಗಳಲ್ಲದೆ, ಕುಟುಂಬದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ, ಅದರ ಐಕ್ಯತೆಗೆ ಹಿರಿಯ ಅನುಸರಿಸಬೇಕಾದ ನಡತೆ ಬಗ್ಗೆ, ಬಳಕೆಯ ವಸ್ತುಗಳ ಬಗ್ಗೆ ಇರುವ ನಂಬಿಕೆಗಳು ಕಿರಿಯರು ಈ ವಿಭಜನೆಯಡಿಯಲ್ಲಿಯೇ ಸೇರುತ್ತವೆ.

ಕೆಲವು ನಂಬಿಕೆಗಳು ಒಳ್ಳೆಯ ಐತಿಹ್ಯಗಳಾಗುತ್ತವೆ. ತುರುವೇಕೆರೆ ಸಮೀಪದ ಮಲ್ಲಾಘಟ್ಟದ ಬಳಿ ಇರುವ ಅಣ್ಣ-ತಮ್ಮಂದಿರ ಗುಡ್ಡಕ್ಕಿರುವ ಕಥೆಯನ್ನು ಉದಾಹರಣೆಯಾಗಿ ಹೇಳಬಹುದು. ಅಣ್ಣತಮ್ಮಂದಿರಲ್ಲಿ ಪರಸ್ಪರ ಆಸೆ ಹೆಚ್ಚಾದಾಗ ಅಣ್ಣನನ್ನು ಊಟಕ್ಕೆ ಕಳುಹಿಸಿ ತಮ್ಮ ರಾಶಿಯನ್ನು ದೋಚುತ್ತಾನೆ. ತಮ್ಮ ಮನೆಗೆ ಹೋದಾಗ ಅಣ್ಣ ತಮ್ಮನ ರಾಶಿಯಲ್ಲಿ ಕದಿಯುತ್ತಾನೆ. ಅವರ ಆಸೆಬುರುಕತನಕ್ಕೆ ಪ್ರಾಯಶ್ಚಿತ್ತವೆಂಬಂತೆ ಇಬ್ಬರ ರಾಶಿಗಳು ಬೆಳಕು ಹರಿಯುವುದರೊಳಗೆ ಮಣ್ಣಿನ ಗುಡ್ಡೆಗಳಾಗಿರುತ್ತವೆ. ಇಂಥ ಒಂದು ನಂಬಿಕೆ ಈಗಲೂ ಸುತ್ತಮುತ್ತಲ ಜನರ ಮೇಲೆ ನೈತಿಕಪ್ರಭಾವವನ್ನು ಬೀರುತ್ತಿವೆ. ತುಂಬಿದ ರಾಶಿಯಲ್ಲಿ ಧಾನ್ಯ ಕದಿಯಬಾರದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಒಂದು ಐತಿಹ್ಯ ಪ್ರಚಲಿತವಾಗಿದೆ. ಹೀಗೆ ಎಷ್ಟೋ ನಂಬಿಕೆಗಳಿಗೆ ಕಾರಣವಾಗಿರುವ ದಂತಕಥೆಗಳಿವೆ. 

ಕೆಲವು ನಂಬಿಕೆಗಳಂತೂ ನೀತಿ ಪ್ರಧಾನವಾಗಿವೆ. ಉಂಡಮನೆಗೆ ಎರಡು ಬಗೆಯಬಾರದು, ತುಂಬಿದ ಕೆರೆಗೆ ಕಲ್ಲುಹೊಡೆಯಬಾರದು ಅಂದರೆ ನೆಮ್ಮದಿಯಿಂದಿರುವವರ ಜೀವನದ ಮಧ್ಯೆ ಪ್ರವೇಶಿಸಿ ಅಶಾಂತಿಯನ್ನು ತರುವ ಯತ್ನ ಬೇಡ ಎಂಬ ಅರ್ಥವನ್ನು ಧ್ವನಿಸುತ್ತದೆ. ಹಸಿದವನಿಗೆ ಅನ್ನಹಾಕಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಮಾನವೀಯತೆಯನ್ನು ಪ್ರತಿನಿಧಿಸುತ್ತದೆ.
ನಂಬಿಕೆಗಳಿಂದ ಮಾನವನಿಗೆ ಉಪಕಾರವಾಗುವ ಸಂದರ್ಭಗಳಿದ್ದಾಗ್ಯೂ ಮುಗ್ಧಜನತೆಗೆ ಬಹಳಷ್ಟು ಸಲ ಈ ಬಗೆಯ ಕೆಲವು ಮೂಢನಂಬಿಕೆಗಳಿಂದ ತಮ್ಮ ಸರ್ವಸ್ವವನ್ನೂ ನಾಶಮಾಡಿಕೊಳ್ಳುವ ಸಂದರ್ಭಗಳು ಒದಗಿಬರುವುದುಂಟು. ಆದ್ದರಿಂದ ಜನಪದ ನಂಬಿಕೆಗಳ ಸಂಗ್ರಹ, ವ್ಯಾಖ್ಯಾನ, ವಿವರಣೆ ಅಧ್ಯಯನಗಳಿಂದ ಅವುಗಳ ವೈಜ್ಞಾನಿಕ ಹಿನ್ನೆಲೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹಿಡಿತಕ್ಕೆ ಸಿಕ್ಕದೆ ಹೋದ ನಂಬಿಕೆಗಳಿಂದ ಎಚ್ಚರವಿರಬೇಕಾದ ಅಗತ್ಯವನ್ನೂ ಅಲಕ್ಷಿಸಕೂಡದು. 

ಕನ್ನಡದಲ್ಲಿ ಈ ಬಗೆಯ ನಂಬಿಕೆಗಳ ಸಂಗ್ರಹ ಸಂಪಾದನೆ ಸಂರಕ್ಷಣೆ ಪ್ರಕಟಣೆಯ ಕಾರ್ಯ ತಕ್ಕಮಟ್ಟಿಗೆ ನಡೆದಿರುವುದರ ಜೊತೆಗೆ ಅವನ್ನು ವೈಜ್ಞಾನಿಕ ಒರೆಗಲ್ಲಿನಿಂದ ಪರೀಕ್ಷಿಸಿ ಪೃಥಃಕರಿಸುವ ಕಾರ್ಯವೂ ನಡೆದಿದೆ. ಅಂಥ ಪ್ರಯತ್ನಗಳಲ್ಲಿ ಮೊಟ್ಟ ಮೊದಲನೆಯದು ರಾಗೌ ಮತ್ತು ಎಂ. ಸಿ. ವಸಂತಕುಮಾರ್ ಅವರು ಜೊತೆಯಾಗಿ ಪ್ರಕಟಿಸಿರುವ 'ಜನಪದ ನಂಬಿಕೆಗಳು ಎಂಬ ಸಂಕಲನ (1972). ಇದರಲ್ಲಿ ವಿಸ್ತಾರವಾದ ಬಹು ಉಪಯುಕ್ತವಾದ ಪ್ರಸ್ತಾವನೆಯಿದೆ. ಅನಂತರ ಜಿ. ವಿ. ದಾಸೇಗೌಡರ 'ನಮ್ಮ ಜನಪದ ನಂಬಿಕೆಗಳು ಎಂಬ ಹೊತ್ತಿಗೆ ಪ್ರಕಟವಾಯಿತು (1972). ಈ ಕೃತಿಯ ವಿಶೇಷವೆಂದರೆ ಉಪಯುಕ್ತ ಪ್ರಸ್ತಾವನೆಯ ಜೊತೆಗೆ ನಂಬಿಕೆಗಳ ವಿಭಜನೆ ವ್ಯಾಖ್ಯಾನ ಇತ್ಯಾದಿಗಳು ಇರುವುದು. ಮತ್ತೊಂದು ಉತ್ತಮ ಸಂಕಲನ ಡಿ. ಕೆ. ರಾಜೇಂದ್ರ ಅವರ 'ನಮ್ಮ ಸುತ್ತಿನ ನಂಬಿಕೆಗಳು (1973). ಈ ದಿಶೆಯಲ್ಲಿ ನಡೆಯಬೇಕಾಗಿರುವ ಅಪಾರ ಕೆಲಸಕ್ಕೆ ಈ ಮೂರು ಸಂಕಲನಗಳೂ ದಿಕ್ಸೂಚಿಗಳಾಗಿವೆ.									 (ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ